ಬಜೆಟ್ 2019



👉🌹 ಬಜೆಟ್ 2019 | ಕೇಂದ್ರ ಸರ್ಕಾರಕ್ಕೆ ಆದಾಯ ಎಲ್ಲಿಂದ? ಖರ್ಚು ಏನೆಲ್ಲಾ?
    👉 ಭಾಗ-1
===================
ಕೇಂದ್ರದಲ್ಲಿ ರಚನೆಯಾಗಿರುವ ನೂತನ ಬಿಜೆಪಿ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಶುಕ್ರವಾರ (ಜುಲೈ 5) ಚೊಚ್ಚಿಲ ಬಜೆಟ್‌ ಮಂಡನೆ ಮಾಡುತ್ತಿದ್ದಾರೆ. ಇದಕ್ಕೂ ಹಿಂದೆ ಫೆಬ್ರುವರಿಯಲ್ಲಿ ಕೇಂದ್ರ ಸರ್ಕಾರ ಬಜೆಟ್‌ ಮಂಡಿಸಿತ್ತಾದರೂ, ಅದು ಚುನಾವಣಾ ಉದ್ದೇಶಕ್ಕಾಗಿ ಮಂಡಿಸಲಾಗಿದ್ದ ಮಧ್ಯಂತರ ಬಜೆಟ್‌ ಮಾತ್ರ ಆಗಿತ್ತು. ಹಾಗಾಗಿ ಇನ್ನುಳಿದಿರುವ ಹಣಕಾಸು ವರ್ಷಕ್ಕಾಗಿ ಇದೇ ಶುಕ್ರವಾರ ಬಜೆಟ್‌ ಮಂಡಿಸಲಾಗುತ್ತಿದೆ.
================
🌹 ಕೇಂದ್ರ ಬಜೆಟ್‌ ಅಂದರೆ ಏನು?
=================
ಆದಾಯ, ವ್ಯಯ, ಕೊರತೆ, ಸಾಲದ ಕುರಿತಾದ ಸರ್ಕಾರದ ಹಣಕಾಸಿಗೆ ಸಂಬಂಧಿಸಿದ ಸಮಗ್ರ ದಾಖಲೆಯೇ ಬಜೆಟ್‌. ಸಮಾಜದ ವಿವಿಧ ವಿಭಾಗಗಳ ಅಗತ್ಯಗಳನ್ನು ಪೂರೈಸಲು, ಹಣಕಾಸು ಒದಗಿಸಲು ಸರ್ಕಾರ ಹಾಕಿಕೊಂಡ ಯೋಜನೆ ಏನು? ಇದಕ್ಕೆ ಬೇಕಾದ ಸಂಪನ್ಮೂಲವನ್ನು, ಆದಾಯವನ್ನು ಹೇಗೆ ಹೊಂದಿಸಲಾಗುತ್ತದೆ ಎಂದು ಈ ದಾಖಲೆಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿರುತ್ತದೆ. ಸಂವಿಧಾನದ ವಿಧಿ 112ರ ಪ್ರಕಾರ ಯಾವುದೇ ಸರ್ಕಾರ ಪ್ರತಿ ಹಣಕಾಸು ವರ್ಷದ ಆರಂಭಕ್ಕೂ ಮುನ್ನ ಬಜೆಟ್‌ ಮಂಡಿಸಬೇಸುವುದು ಅಗತ್ಯ ಮತ್ತು ಕಡ್ಡಾಯ.
=================
🌹 ಬಜೆಟ್‌ ಏಕೆ ಮುಖ್ಯ?
==================
ಸಾಮಾಜಿಕ ನ್ಯಾಯ ಕಲ್ಪಿಸುವ ಸಲುವಾಗಿ ಮತ್ತು ಆರ್ಥಿಕ ಅಸಮಾನತೆಗಳನ್ನು ನೀಗಿಸುವ ಉದ್ದೇಶದಿಂದ ಸಂಪನ್ಮೂಲವನ್ನು ಬಜೆಟ್‌ನ ಮೂಲಕ ಮರುಹಂಚಿಕೆ ಮಾಡುವುದು ಸರ್ಕಾರಗಳ ಮೂಲ ಉದ್ದೇಶ. ಸ್ಪರ್ಧಾತ್ಮಕ ಯುಗದಲ್ಲಿ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸುವಲ್ಲಿ ಬಜೆಟ್‌ ಬಹುಮುಖ್ಯ ಪಾತ್ರ ನಿರ್ವಹಿಸುತ್ತದೆ. ಬಜೆಟ್‌ನಲ್ಲಿನ ಕಾರ್ಯಕ್ರಮಗಳ ಮೂಲಕ ಸರ್ಕಾರಗಳು ಬಡತನ ನಿರ್ಮೂಲನೆ, ಉದ್ಯೋಗ ಸೃಷ್ಟಿ, ಕಲ್ಯಾಣ ಕಾರ್ಯಕ್ರಮಗಳು, ಭದ್ರತೆಯನ್ನು ಸಾಧಿಸಲು ಪ್ರಯತ್ನಿಸುತ್ತವೆ. ಲಭ್ಯವಿರುವ ಸಂಪನ್ಮೂಲವನ್ನು ನ್ಯಾಯಬದ್ಧವಾಗಿ ಬಳಸಲು ಏನೆಲ್ಲ ಯೋಜನೆಗಳನ್ನು ಸರ್ಕಾರ ಹಾಕಿಕೊಂಡಿದೆ ಎಂಬುದನ್ನು ಬಜೆಟ್‌ ದಾಖಲೆಗಳು ಪ್ರತಿಧ್ವನಿಸುತ್ತವೆ.
==================
🌹 ಸಂಪನ್ಮೂಲವನ್ನು ಪ್ರತಿ ವರ್ಷ ಸರ್ಕಾರ ಹೇಗೆ ಸಂಗ್ರಹಿಸುತ್ತೆ?
===================
ಸಂಪನ್ಮೂಲವನ್ನು ಸರ್ಕಾರಗಳು ತೆರಿಗೆ ಮತ್ತು ತೆರಿಗೆಯೇತರ ಮೂಲಗಳಿಂದ ಸಂಗ್ರಹಿಸುತ್ತವೆ. ತೆರಿಗೆಯಲ್ಲೂ ಎರಡು ಬಗೆಗಳಿವೆ. ಒಂದು ನೇರ ತೆರಿಗೆಯಾದರೆ ಮತ್ತೊಂದು ಪರೋಕ್ಷ ತೆರಿಗೆ. ನೇರ ತೆರಿಗೆಯಲ್ಲಿ ಕಾರ್ಪೊರೇಟ್‌ ತೆರಿಗೆ, ವೈಯಕ್ತಿಕ ತೆರಿಗೆ, ಬಂಡವಾಳ ಗಳಿಕೆ, ಆಸ್ತಿ ತೆರಿಗೆಗಳು ಒಳಪಡುತ್ತವೆ. ಪರೋಕ್ಷ ತೆರಿಗೆ ವಿಭಾಗದಲ್ಲಿ ಸುಂಕ, ಅಬಕಾರಿ, ಸರುಕು ಮತ್ತು ಸೇವಾ ತೆರಿಗೆಗಳು ಒಳಪಡುತ್ತವೆ. ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳು ಯಾವತ್ತೂ ಸರ್ಕಾರಗಳಿಗೆ ಆದಾಯ ತಂದುಕೊಡುತ್ತವೆ. ಈ ಆದಾಯ ಸರ್ಕಾರದ ವೆಚ್ಚಗಳನ್ನು ಸರಿದೂಗಿಸಲಾರದೇ ಹೋಗಬಹುದು. ಈ ಅಸಮಾನತೆಯನ್ನು ಸರಿದೂಗಿಸಲು ಸರ್ಕಾರಗಳು ತೆರಿಗೆಯಲ್ಲಿ ಬದಲಾವಣೆ ಮಾಡಿ ಮಾಡಿಕೊಳ್ಳುತ್ತವೆ. ಕೆಲವೊಂದು ತೆರಿಗೆಯನ್ನು ಹೆಚ್ಚಿಸುತ್ತವೆ. ತೆರಿಗೆ ವಿನಾಯ್ತಿಯನ್ನು ರದ್ದುಪಡಿಸುತ್ತವೆ. ತೆರಿಗೆಯಲ್ಲದೇ ಬೇರೆ ಮೂಲಗಳಿಂದ ಸಂಗ್ರಹಿಸುವ ಸಂಪನ್ಮೂಲವನ್ನು ತೆರಿಗೆಯೇತರ ಸಂಪನ್ಮೂಲ ಎಂದೂ ಕರೆಯಲಾಗುತ್ತದೆ. ಇದರಲ್ಲಿ ಶುಲ್ಕ, ದಂಡ, ಜುಲ್ಮಾನೆಗಳು, ಸಾರ್ವಜನಿಕ ಉದ್ದಿಮೆಗಳು, ವಿಶೇಷ ಲೆವಿ, ಅನುದಾನ, ಕೊಡುಗೆಗಳು ಒಳಗೊಂಡಿರುತ್ತವೆ.
==================
🌹 ಆದಾಯ ಮತ್ತು ಸಂಪತ್ತಿನ ಅಸಮತೋಲನವನ್ನು ಬಜೆಟ್‌ ಹೇಗೆ ನಿವಾರಿಸಬಲ್ಲದು?
====================
ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ಕೃಷಿ ಸಬ್ಸಿಡಿ, ಸಮಾಜ ಕಲ್ಯಾಣ, ಆರ್ಥಿಕ ದುರ್ಬಲರಿಗೆ ವಸತಿ, ಆಹಾರ ಒದಗಿಸುವುದು ಸೇರಿದಂತೆ ಹಲವು ಕಲ್ಯಾಣ ಕಾರ್ಯಗಳಿಗೆ ಸರ್ಕಾರಗಳು ಹಣ ವ್ಯಯ ಮಾಡುತ್ತವೆ. ಉಳ್ಳವರು ಹೆಚ್ಚಿನ ಪ್ರಮಾಣದಲ್ಲಿ ಸರ್ಕಾರಕ್ಕೆ ತೆರಿಗೆ ಪಾವತಿ ಮಾಡುವಂತೆ ತೆರಿಗೆ ಪದ್ಧತಿಯನ್ನು ರಚಿಸಲಾಗಿರುತ್ತದೆ. ಸಮಾಜದ ಹಲವು ಬಗೆಗೆಯ ಜನರಿಂದ ವಿವಿಧ ರೀತಿಯ ತೆರಿಗೆಗಳನ್ನು ಸಂಗ್ರಹಿಸಲು ಸರ್ಕಾರಗಳು ಹಲವು ರೀತಿಯ ನೀತಿ ನಿಯಮಗಳನ್ನು ಹಾಕಿಕೊಂಡಿರುತ್ತವೆ.
===============
ಮಾಹಿತಿ ವೇದಿಕೆ

👉🌹 ಬಜೆಟ್ 2019 | ಕೇಂದ್ರ ಬಜೆಟ್ ರೆಡಿ ಆಗೋದು ಹೀಗೆ...
 👉 ಭಾಗ -2
===================
ನರೇಂದ್ರ ಮೋದಿ ನೇತೃತ್ವದಲ್ಲಿ ಎರಡನೇ ಬಾರಿಗೆ ಕೇಂದ್ರದಲ್ಲಿ ಗದ್ದುಗೆಗೇರಿರುವ ಬಿಜೆಪಿ ಸರ್ಕಾರ ಜುಲೈ 5ರಂದು ಪೂರ್ಣ ಪ್ರಮಾಣದ ಬಜೆಟ್ (ಮುಂಗಡ ಪತ್ರ) ಮಂಡಿಸಲಿದೆ. ಈ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರದ ಬಜೆಟ್ ಸಿದ್ಧತೆ ಪ್ರಕ್ರಿಯೆ ಹೇಗಿರುತ್ತೆ? ಬಜೆಟ್ ಪ್ರತಿ ಸಿದ್ಧಪಡಿಸುವುದಕ್ಕೂ ಮುನ್ನ ಏನೇನು ಕೆಲಸಗಳು ನಡೆಯುತ್ತವೆ ಎಂಬ ಮಾಹಿತಿ ಇಲ್ಲಿದೆ.
===============
ಸಾಮಾನ್ಯವಾಗಿ ಪ್ರತಿ ವರ್ಷ ಫೆಬ್ರುವರಿ-ಮಾರ್ಚ್ ತಿಂಗಳಲ್ಲಿ ಬಜೆಟ್ ಮಂಡನೆ ಮಾಡಲಾಗುತ್ತದೆ. ಆದರೆ ಈ ಬಾರಿ ಸರ್ಕಾರದ ಅವಧಿ ಮುಗಿಯುತ್ತಾ ಬಂದ ಕಾರಣ ಫೆಬ್ರುವರಿಯಲ್ಲಿ ಮಧ್ಯಂತರ ಬಜೆಟ್ ಮಂಡನೆ ಮಾಡಲಾಗಿತ್ತು. ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ, ಹೊಸ ಸರ್ಕಾರ ರಚನೆಯಾದ ನಂತರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಾಗುತ್ತದೆ.
================
🌹 ಐದಾರು ತಿಂಗಳ ಮೊದಲೇ ಶುರುವಾಗುತ್ತೆ ಸಿದ್ಧತೆ
=================
ದೇಶದ ವಾರ್ಷಿಕ ವರಮಾನ, ಖರ್ಚು–ವೆಚ್ಚದ ಲೆಕ್ಕಾಚಾರದ ವಿವರಗಳನ್ನು ಅಂದಾಜಿಸಿ ಹಾಗೂ ದಾಖಲೆ ರೂಪದಲ್ಲಿ ಮುದ್ರಿಸಿ ಬಜೆಟ್ ಮಂಡನೆ ಮಾಡಲಾಗುತ್ತದೆ. ವಿಶ್ವದ ಅತಿ ದೊಡ್ಡ ಪ್ರಜಾಸತ್ತಾತ್ಮಕ ರಾಷ್ಟ್ರಗಳಲ್ಲೊಂದಾಗಿರುವ ಭಾರತದಲ್ಲಿ ಬಜೆಟ್ ಸಿದ್ಧಪಡಿಸುವ ಪ್ರಕ್ರಿಯೆ ಸವಾಲಿನದ್ದಾಗಿದ್ದು, ಹಲವು ಹಂತಗಳಲ್ಲಿ ನಡೆಯುತ್ತದೆ. ಬಜೆಟ್‌ನ ಗೋಪ್ಯತೆ ಕಾಪಾಡುವ ಸವಾಲೂ ಸರ್ಕಾರದ ಮುಂದಿರುತ್ತದೆ. ಐದಾರು ತಿಂಗಳು ಮೊದಲೇ, ಸಾಮಾನ್ಯವಾಗಿ ಪ್ರತಿ ವರ್ಷ ಆಗಸ್ಟ್‌ ಅಥವಾ ಸೆಪ್ಟೆಂಬರ್‌ ತಿಂಗಳಿನಲ್ಲಿಯೇ ಮುಂದಿನ ಹಣಕಾಸು ವರ್ಷದ ಬಜೆಟ್‌ ಸಿದ್ಧಪಡಿಸಲು ಆರಂಭಿಸಲಾಗುತ್ತದೆ. ಈ ಪ್ರಕ್ರಿಯೆಯನ್ನು ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯಲ್ಲಿರುವ ಬಜೆಟ್‌ ವಿಭಾಗವು ಮೊದಲು ಆರಂಭಿಸುತ್ತದೆ. ಆಗಸ್ಟ್‌ ತಿಂಗಳ ಕೊನೆಯಲ್ಲಿ ಅಥವಾ ಸೆಪ್ಟೆಂಬರ್ ಮೊದಲ ವಾರ ಬಜೆಟ್ ಸುತ್ತೋಲೆ ಹೊರಡಿಸಲಾಗುತ್ತದೆ. ಪ್ರತಿಯೊಂದು ಇಲಾಖೆಗಳು ಸಿದ್ಧಪಡಿಸಬೇಕಾದ ಮಾಹಿತಿ, ಅಂಕಿಅಂಶಗಳಿಗೆ ಸಂಬಂಧಿಸಿದ ಎಲ್ಲ ಸಲಹೆ–ಸೂಚನೆಗಳನ್ನು ಈ ವಿಸ್ತೃತ ಸುತ್ತೋಲೆ ಒಳಗೊಂಡಿರುತ್ತದೆ. ಕೈಗಾರಿಕೋದ್ಯಮಿಗಳು, ಬಂಡವಾಳದಾರರು, ಪ್ರಮುಖ ಉದ್ಯಮಿಗಳಿಂದಲೂ ಅಭಿಪ್ರಾಯ ಕೋರಲಾಗುತ್ತದೆ.
==================
🌹 ಇಲಾಖೆಗಳ ಕೆಲಸವೇನು?
================
ಬಜೆಟ್ ಸಿದ್ಧತಾ ಹಂತದಲ್ಲಿ ಪ್ರತಿಯೊಂದು ಇಲಾಖೆಗಳೂ ಮುಂದಿನ ಹಣಕಾಸು ವರ್ಷದ ಆಯ–ವ್ಯಯದ ಲೆಕ್ಕಾಚರವನ್ನು ಸಿದ್ಧಪಡಿಸಬೇಕಾಗುತ್ತದೆ. ಬಜೆಟ್ ಅಂದಾಜು, ಪರಿಷ್ಕೃತ ಆಯವ್ಯಯದ ಲೆಕ್ಕಾಚಾರ ಹಾಕಬೇಕಾಗುತ್ತದೆ. ಉದಾಹರಣೆಗೆ; 2019–20ನೇ ಸಾಲಿನ ಬಜೆಟ್‌ಗೆ ಆಯಾ ಇಲಾಖೆಗಳು ಹಮ್ಮಿಕೊಂಡಿರುವ ಯೋಜನೆ, ಅವುಗಳಿಗೆ ತಗಲುವ ಖರ್ಚು, ವರಮಾನದ ವಿವರಗಳನ್ನು 2018ರ ಆಗಸ್ಟ್‌–ಸೆಪ್ಟೆಂಬರ್‌ ತಿಂಗಳಿನಲ್ಲೇ ಲೆಕ್ಕ ಹಾಕಿ ಹಣಕಾಸು ಇಲಾಖೆಗೆ ಕೊಡಬೇಕಾಗುತ್ತದೆ. ಈ ಮಧ್ಯೆ, ಮುಖ್ಯ ಹಣಕಾಸು ಕಾರ್ಯದರ್ಶಿಯೂ ಇತರ ಇಲಾಖೆಗಳ ಆರ್ಥಿಕ ಸಲಹೆಗಾರರ ಜತೆ ಸಭೆ ನಡೆಸಿ ಇಲಾಖಾವಾರು ಖರ್ಚು–ವೆಚ್ಚಗಳ ಪರಿಶೀಲನೆ ನಡೆಸುತ್ತಾರೆ.
================
🌹 ಇತರ ಇಲಾಖೆಗಳ ಜತೆ ಗಾಢ ಸಮಾಲೋಚನ
=================
ಸರ್ಕಾರಿ ಸ್ವಾಮ್ಯದ ಕಂಪನಿಗಳು ಪಾವತಿಸುವ ಲಾಭಾಂಶ (ಡಿವಿಡೆಂಡ್), ಸರ್ಕಾರಿ ಕಂಪನಿಗಳ ಷೇರು ವಿಕ್ರಯದಿಂದ ಸರ್ಕಾರಕ್ಕೆ ಬರುವ ವರಮಾನ ಒಂದೆಡೆಯಾದರೆ; ವಿಶ್ವಬ್ಯಾಂಕ್, ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್(ಎಡಿಬಿ) ಮತ್ತಿತ್ತರ ಅಂತರರಾಷ್ಟ್ರೀಯ ಸಂಸ್ಥೆಗಳಿಂದ ತೆಗೆದುಕೊಳ್ಳುವ ಸಾಲಗಳನ್ನೂ ಬಜೆಟ್‌ ಸಂಪನ್ಮೂಲಗಳೆಂದೇ ಪರಿಗಣಿಸಲಾಗುತ್ತದೆ. ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ/ Central Board of Direct Taxes) ಮತ್ತು ಆದಾಯ ತೆರಿಗೆ (ಐಟಿ/ Income Tax Department) ಇಲಾಖೆಗಳಿಂದ ದೊರೆಯಬಹುದಾದ ವರಮಾನದ ಬಗ್ಗೆಯೂ ಲೆಕ್ಕಾಚಾರ ಹಾಕಲಾಗುತ್ತದೆ. ಸರ್ಕಾರದ ಪ್ರತಿಯೊಂದು ಇಲಾಖೆಯಲ್ಲೂ ಒಬ್ಬೊಬ್ಬ ಹಣಕಾಸು ಸಲಹೆಗಾರರಿದ್ದು ಇವರೆಲ್ಲರ ಜತೆ ಹಣಕಾಸು ಇಲಾಖೆಯ ಮುಖ್ಯ ಕಾರ್ಯದರ್ಶಿ ಸಮಾಲೋಚನೆ ನಡೆಸಿ ಆಯ–ವ್ಯಯದ ಲೆಕ್ಕಾಚಾರ ಹಾಕುತ್ತಾರೆ.
ಸರ್ಕಾರಿ ಸ್ವಾಮ್ಯದ ಕಂಪನಿಗಳದಿಂದ ದೊರೆಯಬಹುದಾದ ವರಮಾನ ಅಂದಾಜಿಸಲು ಆ ಕಂಪನಿಗಳ ಮುಖ್ಯಸ್ಥರು ಹಾಗೂ ವ್ಯವಸ್ಥಾಪಕ ನಿರ್ದೇಶಕರನ್ನು (ಸಿಎಂಡಿ) ಹಣಕಾಸು ಸಚಿವಾಲಯದ ಕಚೇರಿಗೆ ಕರೆಸಿಕೊಂಡು ಸಭೆಗಳನ್ನು ನಡೆಸಲಾಗುತ್ತದೆ. ಜಂಟಿ ಕಾರ್ಯದರ್ಶಿ ಮಟ್ಟದ ಹಣಕಾಸು ಇಲಾಖೆಯ ಕಾರ್ಯದರ್ಶಿಯು ಪ್ರತಿಯೊಬ್ಬ ಸಿಎಂಡಿ ಜತೆಗೂ ಮಾತುಕತೆ ನಡೆಸಿ, ಆದಾಯದ ಅಂದಾಜು ಪಡೆಯುತ್ತಾರೆ. ಆ ವಿವರವನ್ನು ವೆಚ್ಚ ಇಲಾಖೆಯ ಕಾರ್ಯದರ್ಶಿಗೆ ರವಾನಿಸುತ್ತಾರೆ. ಅಲ್ಲಿಂದ ಹಣಕಾಸು ಇಲಾಖೆಗೆ ಮಾಹಿತಿ ರವಾನೆಯಾಗುತ್ತದೆ.
===============
🌹 ಯೋಜನಾ ಆಯೋಗದ ಪಾತ್ರ..
================
ಮುಂಬರುವ ಹಣಕಾಸು ವರ್ಷದಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಯೋಜನೆ ಮತ್ತು ಅವುಗಳಿಗೆ ತಗಲುವ ಅರ್ಚು–ವೆಚ್ಚಗಳ ಅಂದಾಜು ಲೆಕ್ಕವನ್ನು ಎಲ್ಲ ಇಲಾಖೆಗಳು ಯೋಜನಾ ಆಯೋಗಕ್ಕೆ (ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಯೋಜನಾ ಆಯೋಗವನ್ನು ವಿಸರ್ಜಿಸಿ ನೀತಿ ಆಯೋಗವನ್ನು ರಚನೆ ಮಾಡಿದೆ) ಕೊಡುತ್ತವೆ. ಹಾಲಿ ಯೋಜನೆಗಳಿಗೆ ಅನುದಾನ ಮುಂದುವರಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಸಮಾಲೋಚನೆ ನಡೆಸುತ್ತದೆ. ಹಾಲಿ ಯೋಜನೆಗಳನ್ನು ಸ್ಥಗಿತಗೊಳಿಸುವಂತೆ ಅಥವಾ ಕೆಲವೊಮ್ಮೆ ಯೋಜನೆಗಳನ್ನು ವಿಲೀನ ಮಾಡುವಂತೆಯೂ ಆಯೋಗ ಸಲಹೆ ನೀಡುತ್ತದೆ. ಕೊನೆಯದಾಗಿ ಆಯೋಗವು, ಕಲೆಹಾಕಿರುವ ಮಾಹಿತಿಗಳನ್ನೆಲ್ಲ ಕ್ರೋಡೀಕರಿಸಿ ಹಣಕಾಸು ಇಲಾಖೆಗೆ ಒದಗಿಸಿಕೊಡುತ್ತದೆ. ಬಳಿಕ ಹಣಕಾಸು ಸಚಿವರು ಆಯೋಗದ ಉಪಾಧ್ಯಕ್ಷರ ಜತೆ ಸಮಾಲೋಚನೆ ನಡೆಸುತ್ತಾರೆ. ನಂತರ ಹಾಲಿ ಯೋಜನೆಗಳ ಮುಂದುವರಿಸುವಿಕೆ, ಹೊಸ ಯೋಜನೆಗಳ ಸೇರ್ಪಡೆ ಅಥವಾ ಅಸ್ತಿತ್ವದಲ್ಲಿರುವ ಯೋಜನೆಗಳ ವಿಲೀನ ಕುರಿತಾದ ನಿರ್ಧಾರವನ್ನು ಹಣಕಾಸು ಇಲಾಖೆ ಕೈಗೊಳ್ಳುತ್ತದೆ.
================

🌹 ಅಂತಿಮ ಹಂತ
================
ಆರಂಭಿಕ ಹಂತದ ಎಲ್ಲ ಪ್ರಕ್ರಿಯೆಗಳ ಬಳಿಕ ಎಲ್ಲ ಇಲಾಖೆಗಳಿಂದ ಒಟ್ಟು ಎಷ್ಟು ಆದಾಯ ದೊರೆಯಬಹುದು ಎಂಬ ಲೆಕ್ಕ ಸಿಗುತ್ತದೆ. ಈ ಹಂತದಲ್ಲಿ ಮುಂಬರುವ ಹಣಕಾಸು ವರ್ಷದ ಒಟ್ಟು ವರಮಾನದ ಅಂದಾಜು ದೊರೆಯುವುದಲ್ಲದೆ, ಎಷ್ಟು ಖರ್ಚು–ವೆಚ್ಚದ ಮಾಡಬಹುದು ಎಂಬ ಬಗ್ಗೆಯೂ ಲೆಕ್ಕ ಸಿಗುತ್ತದೆ. ಸಾಮಾನ್ಯವಾಗಿ ಜನವರಿ ತಿಂಗಳಲ್ಲಿ ಬಜೆಟ್‌ ಸಿದ್ಧತೆಯ ಅಂತಿಮ ಹಂತದ ಪ್ರಕ್ರಿಯೆ ನಡೆಯುತ್ತಿರುತ್ತದೆ (ಈ ಬಾರಿಯ ಬಜೆಟ್ ಹೊರತುಪಡಿಸಿ). ವಿತ್ತೀಯ ಕೊರತೆ ಕಡಿತಗೊಳಿಸಬೇಕಾದ ಹೊಣೆಯೂ ಇಲಾಖೆ ಮುಂದಿರುವುದರಿಂದ ಎಲ್ಲ ವಿಚಾರಗಳನ್ನೂ ಕೂಲಂಕಶವಾಗಿ ಪರಿಶೀಲಿಸಿ ಹೊಸ ತೆರಿಗೆ ಜಾರಿಗೆ ತರಬೇಕೇ? ಇರುವ ತೆರಿಗೆಯಲ್ಲಿ ಇಳಿಕೆ ಮಾಡಬೇಕೇ? ಅಥವಾ ಮತ್ತಷ್ಟು ಆದಾಯ ಸಂಗ್ರಹಕ್ಕೆ ಏನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಹಣಕಾಸು ಇಲಾಖೆ ನಿರ್ಧಾರ ಕೈಗೊಳ್ಳುತ್ತದೆ. ಅಂತಿಮ ನಿರ್ಧಾರ ಕೈಗೊಳ್ಳುವ ಹಕ್ಕು ಹಣಕಾಸು ಸಚಿವರಿಗೆ ಇರುತ್ತದೆ. ಅಧಿಕಾರಿಗಳ ಜತೆ ಪರಿಶೀಲಿಸಿ ಅವರು ಕೊನೆಯ ತೀರ್ಮಾನ ಕೈಗೊಳ್ಳುತ್ತಾರೆ.
=================
🌹 ಆರ್ಥಿಕ ಸಮೀಕ್ಷೆ
==============
ಬಜೆಟ್‌ ಸಿದ್ಧತೆಗೆ ಸಂಬಂಧಿಸಿದ ಪ್ರಮುಖ ಕೆಲಸಗಳು ಮುಗಿದ ಮೇಲೆ ಮುಖ್ಯ ಆರ್ಥಿಕ ಸಲಹೆಗಾರರ ನೇತೃತ್ವದಲ್ಲಿ ಆರ್ಥಿಕ ಸಮೀಕ್ಷೆ ನಡೆಸಲಾಗುತ್ತದೆ. ಇದರೊಂದಿಗೆ ಬಜೆಟ್ ಮಂಡನೆ ಪ್ರಕ್ರಿಯೆಗೆ ಅಧಿಕೃತ ಚಾಲನೆ ದೊರೆಯುತ್ತದೆ. ಸಾಮಾನ್ಯವಾಗಿ, ಬಜೆಟ್‌ ಮಂಡನೆಗೂ ಮುನ್ನಾ ದಿನ ಆರ್ಥಿಕ ಸಮೀಕ್ಷಾ ವರದಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗುತ್ತದೆ.
================
🌹 ಬಜೆಟ್ ಕ್ರೂಡೀಕರಣ
==============
ಎಲ್ಲ ಸಿದ್ಧತೆ ಪೂರ್ಣಗೊಂಡ ನಂತರ, ರಾಷ್ಟ್ರೀಯ ಸಾಂಖ್ಯಿಕ ಕೇಂದ್ರವು (ಎನ್‌ಐಸಿ) ಬಜೆಟ್‌ಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಕ್ರೂಡೀಕರಿಸುತ್ತದೆ. ದಾಖಲೆಗಳನ್ನು ಕಂಪ್ಯೂಟರೀಕೃತ ಮಾಡಲಾಗುತ್ತದೆ. ನಂತರ ಹಣಕಾಸು ಸಚಿವರು ಬಜೆಟ್ ಮಂಡಿಸುವ ಸಲುವಾಗಿ ರಾಷ್ಟ್ರಪತಿಗಳಿಂದ ಅನುಮತಿ ಪಡೆಯುತ್ತಾರೆ.
================
🌹 ಬಜೆಟ್ ಪ್ರತಿಗಳ ಮುದ್ರಣ
=================
ಬಜೆಟ್‌ಗೆ ಸಂಬಂಧಿಸಿದ ಎಲ್ಲ ದಾಖಲೆ ಸಿದ್ಧವಾದ ಬಳಿಕ ಸಂಸತ್‌ನಲ್ಲಿ ಮಂಡಿಸಲು ಇರುವ ಭಾಷಣದ ಪ್ರತಿಯನ್ನು ರೂಪಿಸುವ ಕಾರ್ಯ ಆರಂಭವಾಗುತ್ತದೆ. ಬಜೆಟ್ ಮಂಡನೆಗೆ ಎರಡು ವಾರಗಳಿರುವಾಗ ಬಜೆಟ್ ಪ್ರತಿಗಳನ್ನು ಮುದ್ರಿಸಲು ಆರಂಭಿಸಲಾಗುತ್ತದೆ. ಈ ಕಾರ್ಯವು ಹಣಕಾಸು ಇಲಾಖೆ ಕಚೇರಿ ಬಳಿ, ಅಂದರೆ ದೆಹಲಿಯ ನಾರ್ತ್‌ ಬ್ಲಾಕ್‌ನಲ್ಲೇ ನಡೆಯುತ್ತದೆ. ಗೋಪ್ಯತೆ ಕಾಪಾಡುವ ಸಲುವಾಗಿ ಬಿಗಿ ಭದ್ರತೆ ಒದಗಿಸಲಾಗುತ್ತದೆ.
==================
🌹 ಹಲ್ವಾ ಸಮಾರಂಭ!
=================
ಬಜೆಟ್ ಪ್ರತಿ ಮುದ್ರಣಕ್ಕೆ ಹೋಗುವ ಮುನ್ನ ಹಣಕಾಸು ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಾಗಿ ‘ಹಲ್ವಾ ಸಮಾರಂಭ’ ಆಯೋಜಿಸಲಾಗುತ್ತದೆ. ಒಮ್ಮೆ ಬಜೆಟ್ ಮುದ್ರಣ ಆರಂಭಗೊಂಡರೆ ಆ ಕಾರ್ಯದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಕಚೇರಿಯಿಂದ ಹೊರಹೋಗುವಂತಿಲ್ಲ. ಕುಟುಂಬದವರು, ಸ್ನೇಹಿತರು ಸೇರಿ ಯಾರೊಂದಿಗೂ ಸಂಪರ್ಕವನ್ನೂ ಇಟ್ಟುಕೊಳ್ಳುವಂತಿಲ್ಲ. ಒಂದು ರೀತಿಯಲ್ಲಿ ಅಜ್ಞಾತವಾಸವನ್ನೇ ಅನುಭವಿಸಕು. ಹೀಗಾಗಿ ‘ಹಲ್ವಾ ಸಮಾರಂಭ’ ಮಾಡಲಾಗುತ್ತದೆ. ದೊಡ್ಡ ಕಡಾಯಿಯಲ್ಲಿ ಹಲ್ವಾ ತಯಾರಿಸಿ ಅಧಿಕಾರಿಗಳು, ಸಿಬ್ಬಂದಿಗೆ ಹಂಚಲಾಗುತ್ತದೆ. ಹಣಕಾಸು ಸಚಿವರೂ ಈ ಕಾರ್ಯದಲ್ಲಿ ಭಾಗಿಯಾಗುತ್ತಾರೆ.
================
🌹 ಬಜೆಟ್ ಮಂಡನೆ
=================
ಭಾರತೀಯ ಸಂವಿಧಾನದ ಪ್ರಕಾರ ಹಣಕಾಸು ಸಚಿವರು ಲೋಕಸಭೆಯಲ್ಲಿ ಬಜೆಟ್ ಮಂಡನೆ ಮಾಡಬೇಕು, ಮಾಡುತ್ತಾರೆ. ಪ್ರತಿ ವರ್ಷ ಫೆಬ್ರುವರಿ ತಿಂಗಳ ಕೊನೆಯ ವರ್ಕಿಂಗ್ ಡೇಯಂದು (ಕೆಲಸದ ದಿನ) ಬಜೆಟ್ ಮಂಡಿಸುವುದು ಹಲವಾರು ವರ್ಷಗಳ ಹಿಂದಿನಿಂದಲೂ ನಡೆದುಬಂದಿದೆ. ಆದರೆ, ಕಳೆದ ವರ್ಷದಿಂದ ಫೆಬ್ರುವರಿ 1ರಂದೇ ಬಜೆಟ್ ಮಂಡನೆ ಮಾಡಲಾಗುತ್ತಿದೆ. ಈ ವರ್ಷವೂ ಮಧ್ಯಂತರ ಬಜೆಟ್ ಅದೇ ದಿನ ಮಂಡನೆಯಾಗಿತ್ತು.
==================
🌹 ಬಜೆಟ್, ಕೆಲವು ವೈಶಿಷ್ಟ್ಯಗಳು
==================
👉 ಈ ಹಿಂದೆ ರೈಲ್ವೆ ಇಲಾಖೆಯ ಬಜೆಟ್‌ ಅನ್ನು ಪ್ರತ್ಯೇಕವಾಗಿ ಮಂಡಿಸಲಾಗುತ್ತಿತ್ತು. ಮುಖ್ಯ ಬಜೆಟ್‌ನ ಒಂದು ದಿನ ಮೊದಲು ಅಥವಾ ಕೆಲವು ದಿನಗಳ ಮೊದಲು ಮಂಡನೆಯಾಗುತ್ತಿತ್ತು. 2016ರಲ್ಲಿ ಕೇಂದ್ರ ಸರ್ಕಾರ ರೈಲ್ವೆ ಬಜೆಟ್ ಅನ್ನು ಮುಖ್ಯ ಬಜೆಟ್ ಜತೆ ವಿಲೀನ ಮಾಡಿದೆ.
👉 ದೇಶದ ಮೊದಲ ಬಜೆಟ್‌ ಮಂಡಿಸಿದವರು– ಆರ್‌.ಕೆ.ಷಣ್ಮುಖಂ ಚೆಟ್ಟಿ*
👉  ಅತಿ ಹೆಚ್ಚು ಬಾರಿ ಬಜೆಟ್‌ ಮಂಡಿಸಿದವರು – ಮೊರಾರ್ಜಿ ದೇಸಾಯಿ (10 ಬಾರಿ ಮಂಡಿಸಿದ್ದಾರೆ). ಪಿ. ಚಿದಂಬರಂ 9 ಮತ್ತು ಪ್ರಣವ್ ಮುಖರ್ಜಿ 8 ಬಾರಿ ಬಜೆಟ್ ಮಂಡಿಸಿದ್ದಾರೆ.
👉 ಪ್ರಧಾನಿಯಾಗಿದ್ದುಕೊಂಡು ಹಣಕಾಸು ಖಾತೆಯನ್ನೂ ನಿಭಾಯಿಸಿ ಮೊದಲ ಬಾರಿ ಬಜೆಟ್ ಮಂಡಿಸಿದವರು – ಜವಹರಲಾಲ್ ನೆಹರು
👉 ಮಹಿಳೆಯೊಬ್ಬರು (ನಿರ್ಮಲಾ ಸೀತಾರಾಮನ್) ಹಣಕಾಸು ಸಚಿವರಾಗಿ ಬಜೆಟ್ ಮಂಡಿಸುತ್ತಿರುವ ಎರಡನೇ ನಿದರ್ಶನವಿದು. 1970–71ರಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ಬಜೆಟ್ ಮಂಡಿಸಿದ್ದರು. ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ಬಜೆಟ್ ಮಂಡಿಸಿದ್ದರು. ಆಗ ಹಣಕಾಸು ಸಚಿವರಾಗಿದ್ದ ಮೊರಾರ್ಜಿ ದೇಸಾಯಿಯವರು ರಾಜೀನಾಮೆ ನೀಡಿದ್ದರಿಂದ ತಾವೇ ಹಣಕಾಸು ಖಾತೆಯನ್ನು ನಿಭಾಯಿಸಿದ್ದರು ಇಂದಿರಾ ಗಾಂಧಿ. ಜತೆಗೆ ದೇಶದ ಮೊದಲ ಮಹಿಳಾ ಹಣಕಾಸು ಮಂತ್ರಿಯಾಗಿ ಗುರುತಿಸಿಕೊಂಡಿದ್ದರು.
==============

Comments