ಡಕ್ವರ್ಥ್ ಲೂಯಿಸ್ ನಿಯಮ




================
ಏನಿದು ಡಕ್ವರ್ಥ್ ಲೂಯಿಸ್ ನಿಯಮ? ಇದರ ಮರ್ಮವೇನು? ಈ ನಿಯಮದ ಅನ್ವಯ ಯಾವ ರೀತಿ ಟಾರ್ಗೆಟ್ ಲೆಕ್ಕಾಚಾರ ಹಾಕುತ್ತಾರೆ? ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯವೊಂದಕ್ಕೆ ಮಳೆಯಿಂದ ಅಡಚಣೆಯಾದರೆ ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿಯ ಮನದಲ್ಲಿಯೂ ಈ ‍ಪ್ರಶ್ನೆಗಳು ಹಾದುಹೋಗುತ್ತವೆ. ಅಂತರರಾಷ್ಟ್ರೀಯ ಕ್ರಿಕೆಟ್‌ ಪಂದ್ಯಕ್ಕೆ ಅಡಚಣೆಯಾಗಿ ಓವರ್‌ಗಳನ್ನು ಕಡಿತಗೊಳಿಸಬೇಕಾಗಿ ಬಂದಾಗ ಟಾರ್ಗೆಟ್ ನಿಗದಿಪಡಿಸಲು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಸದ್ಯ ಡಕ್ವರ್ಥ್ ಲೂಯಿಸ್ ನಿಯಮ ಅನುಸರಿಸುತ್ತಿದೆ.
=================
🌹 ನಿಯಮ ರೂಪಿಸಿದ್ದು ಯಾರು?
=================
ಈ ನಿಯಮದ ಪೂರ್ಣ ಹೆಸರು ‘ಡಕ್ವರ್ಥ್ ಲೂಯಿಸ್–ಸ್ಟರ್ನ್‌ ಮೆಥಡ್’ ಎಂದು. ಬ್ರಿಟನ್‌ನ ಸಂಖ್ಯಾಶಾಸ್ತ್ರಜ್ಞರಾದ ಫ್ರಾಂಕ್‌ ಡಕ್ವರ್ಥ್ ಮತ್ತು ಟೋನಿ ಲೂಯಿಸ್ ಅವರು ಮೊದಲು ಈ ನಿಯಮವನ್ನು ರೂಪಿಸಿದವರು. ನಂತರ ಈ ನಿಯಮವನ್ನು ಪ್ರೊಫೆಸರ್ ಸ್ಟೀವನ್ ಸ್ಟರ್ನ್‌ ಪರಿಷ್ಕರಿಸಿದ್ದಾರೆ. ಹೀಗಾಗಿ 2014ರ ನವೆಂಬರ್ ನಂತರ ಈ ನಿಯಮವನ್ನು ‘ಡಕ್ವರ್ಥ್ ಲೂಯಿಸ್–ಸ್ಟರ್ನ್‌ ಮೆಥಡ್’ ಎಂದು ಕರೆಯಲಾಗುತ್ತಿದೆ.
================
🌹 ಯಾವಾಗ ಅಸ್ತಿತ್ವಕ್ಕೆ ಬಂತು?
==================
ಡಕ್ವರ್ಥ್ ಲೂಯಿಸ್ ನಿಯಮ ಅಸ್ತಿತ್ವಕ್ಕೆ ಬರುವುದಕ್ಕೂ ಮೊದಲು ‘ಸರಾಸರಿ ರನ್‌ರೇಟ್ ವಿಧಾನ’ ಮತ್ತು ‘ಮೋಸ್ಟ್‌ ಪ್ರಡಕ್ಟೀವ್ ಮೆಥಡ್’ ಮೂಲಕ ಟಾರ್ಗೆಟ್ ಲೆಕ್ಕಾಚಾರ ಹಾಕುತ್ತಿದ್ದರು. ಆದರೆ ಇವೆರಡೂ ವಿಧಾನಗಳಲ್ಲಿ ಎರಡನೇ ಇನ್ನಿಂಗ್ಸ್ ಆಡುತ್ತಿರುವ ತಂಡಗಳ ಸರಾಸರಿ ರನ್‌ ಲೆಕ್ಕ ಹಾಕಲಾಗುತ್ತಿತ್ತೇ ವಿನಃ ಪತನಗೊಂಡ ವಿಕೆಟ್‌ಗಳನ್ನು ಗಣನೆಗೆ ತೆಗೆದುಕೊಳ್ಳುತ್ತಿರಲಿಲ್ಲ. 1992ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ನಡೆದ ಸೆಮಿಫೈನಲ್ ಪಂದ್ಯಕ್ಕೆ ಮಳೆಯಿಂದ ಅಡಚಣೆಯುಂಟಾಗಿತ್ತು. ಪಂದ್ಯ ಸ್ಥಗಿತಗೊಂಡಾಗ ದಕ್ಷಿಣ ಆಫ್ರಿಕಾ ತಂಡಕ್ಕೆ 13 ಬಾಲ್‌ಗಳಿಂದ 22 ರನ್‌ಗಳ ಅವಶ್ಯಕತೆಯಿತ್ತು. ಒಟ್ಟು 12 ನಿಮಿಷ ಪಂದ್ಯ ಸ್ಥಗಿತಗೊಂಡಿದ್ದು, ಎರಡು ಓವರ್‌ (12 ಬಾಲ್) ಕಡಿತಗೊಳಿಸಲಾಗಿತ್ತು. ಒಂದು ಬಾಲ್‌ನಲ್ಲಿ 22 ರನ್ ಗುರಿ ನಿಗದಿಪಡಿಸಲಾಗಿತ್ತು! ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು (ಡಕ್ವರ್ಥ್ ಲೂಯಿಸ್ ವಿಧಾನದ ಮೂಲಕವಾದರೆ ದಕ್ಷಿಣ ಆಫ್ರಿಕಾಗೆ 5 ರನ್‌ ಗುರಿ ಇರುತ್ತಿತ್ತು ಎನ್ನಲಾಗಿದೆ). ‘ಇದೊಂದು ಲೆಕ್ಕಾಚಾರದ ಸಮಸ್ಯೆಯಾಗಿದ್ದು, ಇದಕ್ಕೆ ಲೆಕ್ಕಾಚಾರದ ಮೂಲಕವೇ ಪರಿಹಾರ ಹುಡುಕಬೇಕೆಂಬುದನ್ನು ಮನಗಂಡೆ’ ಎಂದು ಆಗ ಡಕ್ವರ್ಥ್ ಹೇಳಿದ್ದರು. ಅಲ್ಲದೆ, ಪರಿಷ್ಕೃತ ಲೆಕ್ಕಾಚಾರದ ವಿಧಾನ ರೂಪಿಸಿದರು.
1997ರ ಜನವರಿ 1ರಂದು ಜಿಂಬಾಬ್ವೆ ಮತ್ತು ಇಂಗ್ಲೆಂಡ್ ನಡುವಣ ‍ಪಂದ್ಯದಲ್ಲಿ ಡಕ್ವರ್ಥ್ ಲೂಯಿಸ್ ನಿಯಮವನ್ನು ಮೊದಲ ಬಾರಿ ಬಳಸಲಾಗಿತ್ತು. ಆ ಪಂದ್ಯದಲ್ಲಿ ಜಿಂಬಾಬ್ವೆ ತಂಡ 7 ರನ್‌ಗಳಿಂದ ಜಯ ಗಳಿಸಿತ್ತು. ಆದರೆ, ಡಕ್ವರ್ಥ್ ಲೂಯಿಸ್ ನಿಯಮವನ್ನು ಐಸಿಸಿ ಅಧಿಕೃತವಾಗಿ ಅಸ್ತಿತ್ವಕ್ಕೆ ತಂದಿದ್ದು 1999ರಲ್ಲಿ.
================
🌹 ಲೆಕ್ಕಾಚಾರ ಹೇಗೆ?
==============
ಸಾಮಾನ್ಯವಾಗಿ, ‘ಸರಾಸರಿ ರನ್‌ರೇಟ್ ವಿಧಾನ’ ಮತ್ತು ‘ಮೋಸ್ಟ್‌ ಪ್ರಡಕ್ಟೀವ್ ಮೆಥಡ್’ ಮೂಲಕ ಟಾರ್ಗೆಟ್ ಲೆಕ್ಕಾಚಾರ ಹಾಕುವಾಗ ಎರಡನೇ ಇನ್ನಿಂಗ್ಸ್ ಆಡುತ್ತಿರುವ ತಂಡಗಳ ಸರಾಸರಿ ರನ್‌ಗಳನ್ನಷ್ಟೇ ಗಣನೆಗೆ ತೆಗೆದುಕೊಳ್ಳುತ್ತಾರೆ. ವಿಕೆಟ್‌ಗಳನ್ನು ಪರಿಗಣಿಸುವುದಿಲ್ಲ. ಆದರೆ ಟಾರ್ಗೆಟ್ ಚೇಸ್ ಮಾಡುವ ಸಂದರ್ಭದಲ್ಲಿ ಪತನವಾದ ವಿಕೆಟ್ ಸಹ ಮುಖ್ಯವಾಗುತ್ತವೆ. ಹೆಚ್ಚು ವಿಕೆಟ್‌ ತಂಡದ ಬಳಿ ಇದ್ದಾಗ ಕೊನೆಯ ಓವರ್‌ಗಳಲ್ಲಿ ಹೆಚ್ಚು ರನ್ ಹೊಡೆಯುವ ಸಾಧ್ಯತೆ ಹೆಚ್ಚು. ‘ಹೆಚ್ಚು ವಿಕೆಟ್ ಇದ್ದಾಗ ಬಾಕಿ ಉಳಿದಿರುವ ಬಾಲ್‌ಗಳೂ ಜಾಸ್ತಿ ಇದ್ದರೆ ತಂಡವೊಂದು ಹೆಚ್ಚು ರನ್ ಗಳಿಸಲು ಸಮರ್ಥ’ ಎನ್ನುವ ನಂಬಿಕೆಯ ಆಧಾರದ ಮೇಲೆ ಡಕ್ವರ್ಥ್ ಲೂಯಿಸ್ ನಿಯಮ ರೂಪುಗೊಂಡಿದೆ. ಡಕ್ವರ್ಥ್ ಲೂಯಿಸ್ ನಿಯಮವು ‘ರಿಸೋರ್ಸ್’ ಆಧಾರದಲ್ಲಿ ಲೆಕ್ಕಹಾಕುತ್ತದೆ. ಇಲ್ಲಿ ‘ರಿಸೋರ್ಸ್’ ಎಂದರೆ ತಂಡದ ಬಳಿ ಬಾಕಿ ಉಳಿದಿರುವ ವಿಕೆಟ್‌ಗಳು ಮತ್ತು ಓವರ್‌ಗಳು ಅಥವಾ ಬಾಲ್‌ಗಳು.
================

Comments